ಕನ್ಯಾಕುಮಾರಿ ಟು ಕಾಶ್ಮೀರ ವಾಕಥಾನ್‌
OneCroreSteps August 9, 2018

ಕನ್ಯಾಕುಮಾರಿ ಟು ಕಾಶ್ಮೀರ ವಾಕಥಾನ್‌

ಮಂಗಳೂರು: ರಸ್ತೆ ಸುರಕ್ಷತಾ ನಿಯಮ ಪಾಲನೆಯ ಜಾಗೃತಿ ಜತೆಗೆ ದೇಶಾದ್ಯಂತ ಹದಗೆಟ್ಟ ರಸ್ತೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೇರಳ ಪಾಲಕ್ಕಾಡ್‌ ಮೂಲದ ವ್ಯಕ್ತಿಯೊಬ್ಬರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡಿಗೆ ಹಮ್ಮಿಕೊಂಡಿದ್ದಾರೆ. 60ಕ್ಕೂ ಹೆಚ್ಚಿನ ದಿನ ದೇಶದ 20 ನಗರಗಳಲ್ಲಿ ನಡೆದಾಡುವ ಮೂಲಕ ಒಟ್ಟು 3,600 ಕಿ.ಮೀ. ದೂರವನ್ನು ನಡೆದೇ ಕ್ರಮಿಸಲಿದ್ದಾರೆ. ಹೀಗೆ ನಡೆಯುತ್ತ ಹದಗೆಟ್ಟ ರಸ್ತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ವೀಡಿಯೋ ಮತ್ತು ಫೋಟೋ ತೆಗೆದು ಕೇಂದ್ರ ಸರಕಾರದಡಿ ಬರುವ ಸಂಬಂಧಪಟ್ಟ ಇಲಾಖೆಗೆ ನೀಡಲಿದ್ದಾರೆ. ಸುಗಮ ಸಂಚಾರಕ್ಕೆ ಪೂರಕವಾಗಿ ಹೇಗೆ ರಸ್ತೆ ವಿನ್ಯಾಸಗಳನ್ನು ಬದಲಾಯಿಸಬಹುದು ಎಂಬ ಸಲಹೆಯನ್ನೂ ನೀಡಲಿದ್ದಾರೆ.

ಮೆಕ್ಯಾನಿಕಲ್‌ ಎಂಜಿನಿಯರ್‌
ಪಾಲಕ್ಕಾಡ್‌ನ‌ 41 ವರ್ಷದ ಸುಬ್ರಹ್ಮಣ್ಯನ್‌ ನಾರಾಯಣನ್‌ ಕಾಶ್ಮೀರದಿಂದ ಕನ್ಯಾಕುಮಾರಿಗೆ ವಾಕಥಾನ್‌ಗೆ ಹೊರಟ ಯುವಕ. ಜು.28ರಂದು ಕನ್ಯಾಕುಮಾರಿಯಿಂದ ನಡಿಗೆ ಆರಂಭಿಸಿದ್ದು, ಅ. 3ರಂದು ಕಾಶ್ಮೀರ ತಲುಪುವ ಗುರಿ ಹೊಂದಿದ್ದಾರೆ. ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಅವರು, ಹೆಲ್ಲಾ ಇಂಡಿಯಾ ಸಂಸ್ಥೆಯ ಉದ್ಯೋಗಿ. ರಸ್ತೆ ಸುರಕ್ಷತೆಯ ಉದ್ದೇಶದಿಂದ ಹೊರಟ ಸುಬ್ರಹ್ಮಣ್ಯನ್‌ ಅವರಿಗೆ ತಾವು ಕೆಲಸ ಮಾಡುತ್ತಿರುವ ಸಂಸ್ಥೆ ಪ್ರೋತ್ಸಾಹಿಸಿ ಗುರಿ ಸಾಧನೆಗಾಗಿ ಕಳುಹಿಸಿಕೊಟ್ಟಿದೆ.

400 ಮನೆಗಳಲ್ಲಿ ನಿತ್ಯ ಅಪಘಾತ ಸಾವು
ರಸ್ತೆ ಅವ್ಯವಸ್ಥೆ, ರಸ್ತೆ ನಿಯಮಗಳನ್ನು ಪಾಲಿಸದಿರುವುದು, ಹೆಲ್ಮೆಟ್‌ ಹಾಕದೇ ವಾಹನ ಚಲಾಯಿಸುವುದು ಮುಂತಾದ ಕಾರಣಗಳಿಂದ ದೇಶದಲ್ಲಿ ಪ್ರತಿವರ್ಷ ಸರಾಸರಿ ಐದು ಲಕ್ಷ ಅಪಘಾತಗಳು ಸಂಭವಿಸುತ್ತಿವೆ. ಹೀಗೆ ಉಂಟಾದ ಅಪಘಾತಗಳಲ್ಲಿ ಕಡಿಮೆ ಎಂದರೂ 1.5 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಸರಾಸರಿ ತೆಗೆದರೆ ರಸ್ತೆ ಅಪಘಾತಗಳಿಂದಾಗಿ ಮರಣವಪ್ಪುತ್ತಿರುವವರ ಸಂಖ್ಯೆ ದಿನಕ್ಕೆ 400! ಅಂದರೆ ದೇಶದ 400 ಮನೆಗಳಲ್ಲಿ ಅಪಘಾತ ಮರಣದ ಸೂತಕದ ಛಾಯೆ ಇರುತ್ತದೆ. ಈ ಸಂಖ್ಯೆಗಳನ್ನು ಗಮನಿಸಿದಾಗ ವೇದನೆಯಾಯಿತು. ರಸ್ತೆ ನಿಯಮ ಪಾಲನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ನಡಿಗೆಯ ನಿರ್ಧಾರ ಕೈಗೊಂಡೆ ಎನ್ನುತ್ತಾರೆ.

ಪ್ರತಿದಿನ ಸುಮಾರು 70 ಕಿ.ಮೀ. ಕ್ರಮಿಸುವ ಅವರು, ಬೆಳಗ್ಗೆ 3.30ಕ್ಕೆ ತಮ್ಮ ನಡಿಗೆ ಆರಂಭಿಸುತ್ತಾರೆ. ಸಂಜೆ 6 ಗಂಟೆಗೆ ಕೊನೆಗೊಳಿಸಿ ಯಾವುದಾದರೂ ಹೊಟೇಲ್‌ನಲ್ಲಿ ತಂಗುತ್ತಾರೆ. ಆ. 8ರಂದು ಮಂಗಳೂರಿಗೆ ಆಗಮಿಸಿದ್ದ ಅವರು, ಬಳಿಕ ಸುರತ್ಕಲ್‌ಗೆ ತೆರಳಿದ್ದಾರೆ. ಆ. 9ರಂದು ಉಡುಪಿಯತ್ತ ತನ್ನ ನಡಿಗೆ ಮುಂದುವರಿಸಲಿದ್ದಾರೆ.

ಒಂದೇ ತಿಂಗಳಲ್ಲಿ 35 ಕೆಜಿ ತೂಕ ಇಳಿಕೆ!
ವಿಶೇಷವೆಂದರೆ ಸುಬ್ರಹ್ಮಣಿಯನ್‌ ಅವರು ಕಳೆದ ಒಂದೇ ತಿಂಗಳಲ್ಲಿ 35 ಕೆಜಿ ತೂಕ ಕಳೆದುಕೊಂಡಿದ್ದು, ಪ್ರಸ್ತುತ 70 ಕೆಜಿ ಇದ್ದಾರೆ. ಈವರೆಗೆ ನಡೆದ 12 ದಿನಗಳಲ್ಲಿ ಅತಿ ಹೆಚ್ಚು ತೂಕ ಕಳೆದುಕೊಂಡಿದ್ದು, ಆರೋಗ್ಯಕ್ಕೂ ಇದರಿಂದ ಉತ್ತಮ ಪರಿಣಾಮವಿದೆ ಎನ್ನುತ್ತಾರೆ ಅವರು. ಈ ವಾಕಥಾನ್‌ಗೆ ಮುನ್ನವೂ ನಡೆಯುವುದನ್ನು ರೂಢಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು ಎನ್ನುತ್ತಾರೆ ಅವರು.

Source From : udayavani

https://www.udayavani.com/kannada/news/mangalore-news/315484/kanyakumari-to-kashmir-walkathon-to-create-road-safety